Friday, April 11, 2008

ವೈದ್ಯ ರೂಪದಲ್ಲಿದ್ದ ರಾಕ್ಷಸ

ಭಾನುವಾರವಾದ್ದರಿಂದ ಕೆಲಸದ ಗಡಿಬಿಡಿ ಇರಲಿಲ್ಲ. ಮನೆಯ ಹೊರಗಿದ್ದ ಕೈತೋಟದಲ್ಲಿ ಗಿಡಗಳನ್ನು ಗಮನಿಸುತ್ತಿದ್ದೆ. ಪಕ್ಕದ ಮನೆಯ ಸವಿತಾ ಮುಖ ಧುಮ್ಮಿಸಿಕೊಂಡು ಬರುತ್ತಿರುವುದು ಕಾಣಿಸಿತು. ಸವಿತಾ ನನ್ನ ಪರಿಚಿತ ಹುಡುಗಿ. ನಾವು ಈ ಮನೆ ಕೊಂಡಾಗಿನಿಂದ ಆ ಕುಟುಂಬವನ್ನು ನೋಡುತ್ತಾ ಬಂದಿದ್ದೆ. ಕೆಳಮಧ್ಯಮ ವರ್ಗದ ಸಂಸಾರ. ತಂದೆಗೆ ಕೆಲಸ ಇರಲಿಲ್ಲ. ತಾಯಿ ಯಾವುದೋ ಗಾರ್ಮೆಂಟಿನಲ್ಲಿ ದುಡಿಯುತ್ತಿದ್ದರು. ಸವಿತಾ ಮತ್ತು ಅವಳ ಅಕ್ಕ ಕೂಡ ದುಡಿಮೆ ಮಾಡುತ್ತಿದ್ದರೂ ಆರ್ಥಿಕವಾಗಿ ಅಂತಹ ಅನುಕೂಲವಿದ್ದಂತಿರಲಿಲ್ಲ. ಆದರೂ ಯಾರ ಗೊಡವೆಗೂ ಹೋಗದೆ, ತಮ್ಮಷ್ಟಕ್ಕೆ ತಾವಿರುತ್ತಿದ್ದ ಮರ್ಯಾದಸ್ಥ ಸಂಸಾರ. ಆಗೀಗ ನನ್ನಲ್ಲಿಯೂ ಹಣವನ್ನು ಎರವಲು ಪಡೆದಿದ್ದುಂಟು. ಆದರೆ ಹೇಳಿದ ಸಮಯಕ್ಕೆ ತಂದೊಪ್ಪಿಸುವಂತಹ ಪ್ರಾಮಾಣಿಕತೆಯೂ ಅವರಲ್ಲಿತ್ತು. ಹಾಗಾಗಿ ನಾನು ದುಡ್ಡು ಕೊಡಲು ಎಂದೂ ಹಿಂದುಮುಂದು ನೋಡುತ್ತಿರಲಿಲ್ಲ.

ಸವಿತಾ ಎರಡು ದಿನದಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದಳು. ಯಾಕೆಂದು ವಿಚಾರಿಸಿದಾಗ ಎಲ್ಲೋ ಬಿದ್ದು ಮಂಡಿಗೆ ಗಾಯವಾಗಿರುವುದಾಗುವುದಲ್ಲದೆ, ಆ ನೋವಿಗೆ ಜ್ವರ ಬಂದಿರುವುದಾಗಿಯೂ ಹೇಳಿದ್ದಳು. ಅಷ್ಟು ಹೊತ್ತಿಗೆ ಸವಿತಾ ಮನೆ ಸಮೀಪಿಸಿದ್ದಳು. ವಿಚಾರಿಸೋಣವೆಂದು ಕರೆದು ಮಾತಾಡಿಸಿದೆ. ಅಷ್ಟೊತ್ತಿಗೆ ಬಿಸಿಲು ಏರಿದ್ದರಿಂದ ಅವಳನ್ನೂ ಕರೆದುಕೊಂಡು ಮನೆಯೊಳಗೆ ನಡೆದೆ. ಸವಿತಾ ಹೇಳತೊಡಗಿದಳು-

’ಬೆಳಿಗ್ಗೆ ಏಳುವ ಹೊತ್ತಿಗಾಗಲೇ ಜ್ವರ ಹೆಚ್ಚಾಗಿದ್ದರಿಂದ ಮನೆಯ ಹತ್ತಿರವೇ ಇರುವ ಡಾಕ್ಟರ ಹತ್ತಿರ ಹೋಗಿದ್ದಳಂತೆ. ಆ ಡಾಕ್ಟರಲ್ಲಿ ಸವಿತಾ ಮತ್ತು ಮನೆಯವರು ಆಗಾಗ ಹೋಗುವುದುಂಟು. ಸವಿತಾಳ ಮನೆಯ ಪರಿಸ್ಥಿತಿಯೂ ಅವರಿಗೆ ತಿಳಿದಿರುವುದರಿಂದ ಹೆಚ್ಚು ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ತಮಗೆ ಸ್ಯಾಂಪಲ್ ಬಂದ ಕೆಲವು ಔಷಧಿಗಳನ್ನು ಉಚಿತವಾಗಿ ಕೊಟ್ಟು ಕಳಿಸುತ್ತಿದ್ದರು. ಈ ದಿನ ಸವಿತಾ ಹೋದಾಗ ಆ ಡಾಕ್ಟರು ಒಬ್ಬನೇ ಇದ್ದನಂತೆ. ಸವಿತಾಳನ್ನು ಒಳ ಕೋಣೆಯೊಳಗೆ ಪರೀಕ್ಷಿಸಲು ಕರೆದಿದ್ದಾರಂತೆ. ಮಂಡಿ ಮೇಲಿನ ಗಾಯವನ್ನು ನೋಡಲೆಂದು ಸೀರೆ ಮೇಲೆ ಸರಿಸಲು ಹೇಳಿದನಂತೆ. ಸವಿತಾ ಲಕ್ಷಣವಾದ ಯುವತಿ. ಯೌವನ ತುಂಬಿದ ಅವಳ ತೊಡೆಗಳು ಡಾಕ್ಟರ ಬುದ್ಧಿಯನ್ನು ಕೆಡಿಸಿರಬೇಕು. ಮಂಡಿಯನ್ನು ಪರೀಕ್ಷಿಸುವ ನೆಪದಲ್ಲಿ ಅವಳ ತೊಡೆಯನ್ನೆಲ್ಲಾ ಸವರಿದನಂತೆ. ಮುಗ್ಧೆ ಸವಿತಾಗೆ ಅವರ ಹುನ್ನಾರ ಅರ್ಥವಾಗಿಲ್ಲ. ನಂತರ ಜ್ವರ ಪರೀಕ್ಷಿಸಲು ಸ್ಟೆತಾಸ್ಕೋಪನ್ನು ಅವಳ ಎದೆಯ ಮೇಲಿಡಲು ಹೋದಾಗ, ಎದೆ ಬಡಿತ ಸರಿಯಾಗಿ ಕೇಳುತ್ತಿಲ್ಲವೆಂದು ಎದೆ, ಬೆನ್ನನ್ನು ಅನಗತ್ಯವಾಗಿ ಸ್ಪರ್ಶಿಸಿ, ತೀಟೆ ತೀರಿಸಿಕೊಂಡಿದ್ದಾನೆ. ಸವಿತಾಳ ಅಮಾಯಕತೆ ಡಾಕ್ಟರನಿಗೆ ತಿಳಿದುಹೋಗಿದೆ. ಅಷ್ಟಕ್ಕೇ ತೃಪ್ತನಾಗದ ಡಾಕ್ಟರು ಚಪಲದಿಂದ ಸವಿತಾಳ ಮೈಕೈ ನೇವರಿಸಲು ಪ್ರಾರಂಭಿಸಿದ್ದಾನೆ. ಆಗ ಸವಿತಾಳಿಗೆ ಅವನ ಉದ್ದೇಶ ಅರ್ಥವಾಗಿ, ಮತ್ತೇನು ಮಾಡುತ್ತಾನೋ ಎಂದು ಭಯವಾಗಿದೆ. ಅವನ ಕೈಗಳನ್ನು ಕಿತ್ತೊಗೆದು, ಹೊರಗೆ ಓಡಿ ಬಂದಿದ್ದಾಳೆ. ಆಘಾತಗೊಂಡ ಮನಸ್ಸಿಗೆ ಏನು ಮಾಡಬೇಕೆಂದೂ ತೋಚಿಲ್ಲ. ದಾರಿಯಲ್ಲಿ ತನ್ನ ಮುಗ್ಧತೆಯನ್ನು ಡಾಕ್ಟರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದ್ದು ತಿಳಿದು ಅಳು, ಆಕ್ರೋಶ ಉಕ್ಕಿ ಬಂದಿದೆ.

ಒಂದೇ ಉಸಿರಿಗೆ ತನ್ನ ನೋವೆಲ್ಲವನ್ನೂ ನನ್ನ ಮುಂದೆ ಕಕ್ಕಿಕೊಂಡಳು. ನನಗೆ ಕನಿಕರವೆನಿಸಿತು. ಪಾಪ, ಲೋಕಜ್ಞಾನವಿಲ್ಲದ ಹುಡುಗಿ. ವಿಧ್ಯಾಭ್ಯಾಸವೂ ಕಡಿಮೆಯೇ. ಸಕಾಲದಲ್ಲಿ ಎಚ್ಚೆತ್ತುಕೊಳ್ಳದಿದ್ದರೆ ವೈದ್ಯರೂಪದಲ್ಲಿದ್ದ ರಾಕ್ಷಸನ ಕಾಮದಾಹಕ್ಕೆ ಬಲಿಯಾಗಿಹೋಗುತ್ತಿದ್ದಳೇನೋ ಎನ್ನಿಸಿ ಮರುಕವಾಯಿತು. ಡಾಕ್ಟರಿನಿಂದಾದ ಅನುಭವದಿಂದಾಗಿ ಸವಿತ ನನ್ನನ್ನು ಕೂಡ ಅನುಮಾನ ದೃಷ್ಟಿಯಿಂದ ನೋಡುತ್ತಿರಬಹುದೇ ಎಂಬ ನೋವು ಕಾಡಿತು. ’ಇರು, ಬಂದೆ’ ಎಂದು ಒಳಗೆ ಹೋಗಿ ಸವಿತಾಳಿಗೆ ಕುಡಿಯಲು ತಂಪು ಪಾನೀಯ ತಂದುಕೊಟ್ಟೆ. ಸವಿತಾ ಅದನ್ನು ನಿಧಾನವಾಗಿ ಕುಡಿದು ಸುಧಾರಿಸಿಕೊಂಡಳು.

"ಸವಿತಾ, ಭಯಪಡಬೇಡ. ಈ ಡಾಕ್ಟರನಂತಹ ಗೋಮುಖವ್ಯಾಘ್ರರು ನಮ್ಮ ಸಮಾಜದಲ್ಲಿ ಬಹಳ ಜನವಿದ್ದಾರೆ. ಅವರು ನಿನ್ನಂತಹ ಮುಗ್ಧರಿಗೆ ಬಲೆ ಬೀಸುತ್ತಲೇ ಇರುತ್ತಾರೆ. ನಿನ್ನಂತವರು ಅವರ ಉಪಾಯಗಳಿಗೆ ಸಿಕ್ಕುಬೀಳಬಾರದು. ಅಷ್ಟೇ ಅಲ್ಲ, ಇಂತಹ ವಂಚಕರ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಬೇಕು. ನಡಿ. ನಾನು ಬರುತ್ತೇನೆ. ಆ ಡಾಕ್ಟರಿಗೆ ತೋರಿಸೋಣ ಬಾ, ಹೆಣ್ಣಿನ ಶೀಲದ ಬೆಲೆ ಏನು ಅಂತ. ನಿನ್ನಂಥವರು ಮರ್ಯಾದೆಗೆ ಅಂಜಿ, ಅಪಮಾನವನ್ನು ಅಡಗಿಸಿಕೊಂಡು ಸುಮ್ಮನಾಗಿಬಿಟ್ಟರೆ ಆ ವೈದ್ಯ ನಿನ್ನಂತಹ ಮತ್ತೆಷ್ಟೋ ಹೆಣ್ಣುಮಕ್ಕಳನ್ನು ತನ್ನ ಪಿಪಾಸೆಗೆ ಬಳಸಿಕೊಳ್ಳುತ್ತಾನೆ. ಅವನ ಯೋಗ್ಯತೆಯೇನು ಎಂದು ಎಲ್ಲರಿಗೂ, ಅವನ ಹೆಂಡತಿ-ಮಕ್ಕಳಿಗೂ ತಿಳಿಯಲೇಬೇಕು, ನಡಿ ಹೋಗೋಣ" ಎಂದು ಮೇಲೆದ್ದೆ. ಸವಿತ ಕಣ್ಣೊರೆಸಿಕೊಂಡು ನನ್ನೊಡನೆ ಹೊರಟಳು.

No comments: