Wednesday, April 15, 2009

ನೆಟ್‍ವರ್ಕಿಂಗ್ ಲೇಖಕರು

ನಗೆ ಸಾಮ್ರಾಟರು ಕೆಲವು ದಿನಗಳ ಹಿಂದೆ ಜನಪ್ರಿಯ ಲೇಖಕರಾಗುವುದು ಹೇಗೆ ಎಂದು ಕೆಲವು ಸಲಹೆಗಳನ್ನು ಕೊಟ್ಟಿದ್ದರು. ಅದನ್ನು ನೋಡಿ ಸಾಮ್ರಾಟರು ಮರೆತ ಮತ್ತೆ ಕೆಲವು ಅಂಶಗಳ ನೆನಪಾಯಿತು. ನೆಟ್‍ವರ್ಕಿಂಗ್ ಮೂಲಕವೂ ಜನಪ್ರಿಯ ಲೇಖಕರಾಗಬಹುದೆಂಬುದನ್ನು ಸಾಮ್ರಾಟರು ಮರೆತಿದ್ದಾರೆ ಅನ್ನಿಸಿತು. ಹಾಗಾಗಿ ಅವುಗಳನ್ನೆಲ್ಲಾ ಸೇರಿಸಿ ನೆಟ್‍ವರ್ಕಿಂಗ್ ಮೂಲಕ ಜನಪ್ರಿಯ ಲೇಖಕರಾಗುವ ಬಗೆ ಹೇಗೆ? ಎಂಬ ಲೇಖನ ತಯಾರಿಸಿದ್ದೇನೆ. ಪ್ರೇರಣೆ ನೀಡಿದ ಸಾಮ್ರಾಟರಿಗೆ ಬಹುಪರಾಕ್!!

ಲೇಖಕರಿಗೆ ಮಾತ್ರವಲ್ಲ, ಯಾವ ನಟನಿಗೂ ಹುಟ್ಟುತ್ತಲೇ ಅಭಿಮಾನಿಗಳು ಸೃಷ್ಟಿಯಾಗಿರುವುದಿಲ್ಲ ತಾನೇ? ನಟನೊಬ್ಬ ಸಿನಿಮ ಮೂಲಕ ಬಹುಜನರನ್ನು ಏಕಕಾಲದಲ್ಲಿ ತಲುಪುವುದರಿಂದ ಅವನಿಗೆ ದಿಢೀರ್ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಆದರೆ ಲೇಖಕನಿಗೆ ಆ ಭಾಗ್ಯವಿಲ್ಲ. ಓದುವ ಅದರಲ್ಲೂ ಸಾಹಿತ್ಯ ಓದುವ ಜನ ಕಡಿಮೆ ಇರುವ ಕಾರಣ ಅವನೇ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳಬೇಕು. ಹೇಗೆಂದರೆ, ಇಮೈಲ್ ಮೂಲಕ, ಯಾಹೂ, ಜಿಟಾಕ್ ಮೂಲಕ ಮೊದಲು ಆತ ಸ್ನೇಹಿತ ವಲಯವನ್ನು ವಿಸ್ತರಿಸಿಕೊಳ್ಳಬೇಕು. ಯಾವುದೇ ಇಮೈಲ್ ಅಡ್ರೆಸ್ ಸಿಕ್ಕರೂ ಬಕಪಕ್ಷಿಯಂತೆ ಅದನ್ನು ತನ್ನ ಅಡ್ರೆಸ್ ಬುಕ್ಕಿಗೆ ಸೇರಿಸಿಕೊಳ್ಳಬೇಕು. ಹೀಗೆ ದೊರೆತ ಗೆಳೆಯರೊಡನೆ, ಆಗಾಗ ಚಾಟ್ ಕಿಟಕಿಯಲ್ಲಿ ವಿನೋದವಾಗಿ ಮಾತನಾಡಿ ಗೆಳೆತನವನ್ನು ವೃದ್ಧಿಸಿಕೊಳ್ಳಬೇಕು.

ಮುಂದಿನ ಹಂತವೆಂದರೆ, ಲೇಖಕ ತನ್ನ ಪ್ರಕಟವಾದ ಯಾವುದಾದರೂ ಕಥೆ, ಕವನ, ಲೇಖನದ ಲಿಂಕನ್ನು ತನ್ನ ಸ್ನೇಹಿತರ ಇಮೈಲ್‍ಗೆ ರವಾನಿಸಬೇಕು. ಚಾಟ್ ವಿಂಡೋದಲ್ಲಿ ಸಿಕ್ಕವರಿಗೂ ಲಿಂಕುಗಳನ್ನು ಕೊಟ್ಟು ಅದನ್ನು ಓದುವಂತೆ ನೆನಪಿಸಬೇಕು.

ಆರ್ಕುಟ್, ಫೇಸ್‍ಬುಕ್ ಗಳನ್ನು ಕೂಡ ತಮ್ಮ ಕೆಲಸಕ್ಕೆ ಸಹಾಯಕವಾಗುವಂತೆ ಬಳಸಿಕೊಳ್ಳಬಹುದಾಗಿದೆ. ಹೇಗೆಂದರೆ, ಈ ತಾಣಗಳಲ್ಲಿ ಸ್ಕ್ರಾಪ್, ಕಾಮೆಂಟ್ ಹಾಕುವ ಸೌಲಭ್ಯ ಇದ್ದೇ ಇರುತ್ತದೆ ಅಲ್ಲವೇ? ಅಲ್ಲೆಲ್ಲಾ ಹೋಗಿ ಆ ಪ್ರೊಫೈಲ್ ಹೆಸರಿನವರನ್ನು ಮೊದಲು ಹೊಗಳಬೇಕು. ಹಾಗಾಗಿ ಮುಖಸ್ತುತಿ ಅನಿವಾರ್ಯ. ನಿಷ್ಟುರ, ಕಟು ಅಭಿಪ್ರಾಯಗಳನ್ನು ಎಂದಿಗೂ ವ್ಯಕ್ತಪಡಿಸಬಾರದು. ನೆನಪಿಡಿ.

ಈಗ ಪ್ರಕಾಶ ಎಂಬುದು ವ್ಯಕ್ತಿಯ ಹೆಸರು ಎಂದಿಟ್ಟುಕೊಳ್ಲೋಣ . ಆ ಪ್ರಕಾಶನೂ ಉದಯೊನ್ಮುಖ ಲೇಖಕನೇ ಆಗಿರುತ್ತಾನೆ ಎಂದುಕೊಳ್ಳೋಣ -

ಆಗ ನಿಮ್ಮ ಕಾಮೆಂಟು ಹೀಗಿರಬೇಕು -

‘ಪ್ರಕಾಶ’ ಕವಿತೆಯ ವಿಕಾಸ
ಎಲ್ಲರ ಮುಖದಲ್ಲೂ ಮಂದಹಾಸ -

ಈ ರೀತಿ... ನಿಮ್ಮ ಕಲ್ಪನಾ ಶಕ್ತಿ ಉಪಯೋಗಿಸಿ ಮತ್ತಷ್ಟು ಚಂದದ ಆಶುಕವಿತೆ ರಚಿಸುವ ಹೊಣೆ ನಿಮ್ಮದು. ಕೆಲವು ಬಾರಿ ಪ್ರಾಸ ಹೊಂದದೆ ಸಿಲ್ಲಿ ಅನ್ನಿಸಿದರೂ ಪರವಾಗಿಲ್ಲ. ಯಾರಾದರೂ ಆ ಬಗ್ಗೆ ಪ್ರಶ್ನಿಸಿದರೆ ಅವರ ಹಾಸ್ಯಪ್ರಜ್ಞೆಯನ್ನೇ ಪ್ರಶ್ನೆ ಮಾಡಿ ಬಚಾವಾಗಬಹುದು. ಈ ರೀತಿ ನಿಮ್ಮಿಂದ ಹೊಗಳಿಸಿಕೊಂಡ ಪ್ರಕಾಶ ಇನ್ನು ಮುಂದೆ ನಿಮ್ಮ ಅಭಿಮಾನಿ ದಾಸ!

ಈಗ ಮಂಗಳಮ್ಮ ಎಂಬ ಒಬ್ಬಳು ನಿಮ್ಮ ಲಿಸ್ಟಿನಲ್ಲಿದ್ದಾನೆ ಎಂದುಕೊಳ್ಳಿ - ಅವಳಿಗೆ ಅವಳ ಬ್ಲಾಗಿನಲ್ಲಿ ಹಾಕಬೇಕಾದ ಕಾಮೆಂಟು -
‘ಮಂಗಳ’ಳ ಈ ಸುದಿನ ಮಧುರವಾಗಲಿ’ - ಇದನ್ನೋದಿ ಪ್ರಸನ್ನಳಾದ ಆ ಮಂಗಮ್ಮ ಕ್ಷಮಿಸಿ ಮಂಗಳಮ್ಮ ಇನ್ನು ನಿಮ್ಮ ಪರ್ಮನೆಂಟ್ ಅಭಿಮಾನಿಯೇ. ನಿಮ್ಮ ಲೇಖನಗಳನ್ನು ಓದಿ ಮುಲಾಜಿಗಾಗಿಯಾದರೂ ಕಾಮೆಂಟು ಹಾಕುತ್ತಾಳೆ! ತನ್ನ ಸ್ನೇಹಿತರಿಗೂ ನಿಮ್ಮ ಲೇಖನವನ್ನು ಓದಲು ಶಿಫಾರಸು ಮಾಡುತ್ತಳೆ.

ಇಂತಹ ಕಾಮೆಂಟುಗಳನ್ನು ಹಾಕುವಾಗ ಕನ್ನಡವಲ್ಲದೆ ನಿಮಗೆ ತಿಳಿದಿರುವ ತೆಲುಗು, ತಮಿಳು, ಸಂಸ್ಕೃತ ಮತ್ತಿತ್ತರ ಭಾಷೆಗಳ ಸಾಹಿತ್ಯವನ್ನು ಬಳಸಿಕೊಳ್ಳಿ. ಆದರೆ ಅದರ ಅರ್ಥವನ್ನೂ ವಿವರಿಸಬೇಕಾದ್ದು ಅಗತ್ಯ. ಒಟ್ಟಿನಲ್ಲಿ ಹೊಗಳುವಿಕೆ ಇರಲೇಬೇಕು. ಇಲ್ಲದಿದ್ದರೆ ಈ ಐಡಿಯಾ ವರ್ಕ್ ಆಗುವುದು ಅನುಮಾನ.