Monday, February 23, 2009

ಅವರವರ ಚಿಂತೆ ಅವರಿಗಂತೆ

ತುಂಬಾ ದಿನಗಳ ನಂತರ ಅಮೆರಿಕದಿಂದ ಸೋದರಳಿಯ ಬಂದಿದ್ದ. ನಮಗೆಲ್ಲಾ ಬಹಳ ಖುಷಿ. ನಿನ್ನೆ ಬೆಳಿಗ್ಗೆ ರೊಟ್ಟಿ ತಿನ್ನುತ್ತಾ ಟಿವಿ ನೋಡುತ್ತಿದ್ದೆವು. ಅದೇ ಸಮಯದಲ್ಲಿ ಅಲ್ಲಿ ಸಂಗೀತ ಪ್ರಸಾರವಾಗುತ್ತಿತ್ತು. ಕೆಲವು ತಿಂಗಳ ಹಿಂದೆ ಅಮೆರಿಕದಿಂದ ಹಿಂತಿರುಗಿದ್ದ ಸಂಗೀತಗಾರರೊಬ್ಬರು ಹೇಳಿದ ಮಾತು ನೆನಪಾಯಿತು. ಅವರು ನಮ್ಮ ಕುಟುಂಬದವರಿಗೆಲ್ಲಾ ಬಹಳ ಪರಿಚಿತರು. ಅವರು ವರ್ಷಕ್ಕೊಮ್ಮೆಯೋ, ಎರಡು ವರ್ಷಕ್ಕೊಮ್ಮೆಯೋ ಅಮೆರಿಕಕ್ಕೆ ಹೋಗಿ ಕಾರ್ಯಕ್ರಮಗಳನ್ನು ಕೊಟ್ಟು ಬರುತ್ತಿದ್ದರು. ಅಲ್ಲಿಯ ಜನ ಅವರ ಗಾಯನವನ್ನು ತುಂಬಾ ಮೆಚ್ಚಿಕೊಂಡಿದ್ದಾರಂತೆ. ಹಾಗೆ ಹೋಗಿ ಬಂದಾಗ ಕೈತುಂಬಾ ದುಡ್ಡು ಮಾಡಿಕೊಂಡು ಬರುತ್ತಿದ್ದರು. ಜೊತೆಗೆ ತೆಗೆದುಕೊಂಡುಹೋಗುತ್ತಿದ್ದ ಸಿಡಿಗಳ ವ್ಯಾಪಾರದಿಂದಲೂ ಸಾಕಷ್ಟು ಲಾಭವಾಗುತ್ತಿತ್ತಂತೆ.

ಈ ಬಾರಿ ಅಮೆರಿಕದಿಂದ ಹಿಂತಿರುಗಿದಾಗ ಅವರಿಗೆ ಅಲ್ಲಿ ಅಷ್ಟು ಸಮಾಧಾನವಾಗಿರಲಿಲ್ಲ. ನಮ್ಮಲ್ಲಿಗೆ ಭೇಟಿ ಕೊಟ್ಟಾಗ ಹೇಳಿದ್ದರು. - ಅಲ್ಲಿಯ ಜನ ದುಡ್ಡು ಬಿಚ್ಚೋದಕ್ಕೆ ಬಹಳ ಹಿಂದು ಮುಂದು ನೋಡುತ್ತಾರೆ. ಬಹಳ ಜಿಪುಣರು ಎಂದು. ಯಾವುದೋ ಊರಿನಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದಾಗ ಸಾಕಷ್ಟು ಜನ ಬರದೆ ಖುರ್ಚಿಗಳು ಖಾಲಿ ಹೊಡೆಯುತ್ತಿದ್ದವಂತೆ. ಈ ಸಲದ ಸಂಪಾದನೆ ವಿಮಾನಯಾನದ ಖರ್ಚು, ಮತ್ತಿತರ ಬಾಬ್ತುಗಳಿಗೇ ಸರಿಹೋಯಿತಂತೆ. ಅದೇ ಕಾರಣಕ್ಕೆ ಆ ಕಲಾವಿದರು ಬೇಸರಗೊಂಡಿದ್ದರು.

ಸೋದರಳಿಯನನ್ನು ರೇಗಿಸಬೇಕೆನಿಸಿತು. ’ಅಲ್ಲಾ ಕಣಯ್ಯಾ, ಕೈತುಂಬಾ ಡಾಲರ್ ಸಂಪಾದಿಸುತ್ತೀರಿ. ನಮ್ಮ ಕನ್ನಡದ ಕಲಾವಿದರೊಬ್ಬರಿಗೆ ಕೈ ಎತ್ತಿ ಕೊಟ್ಟರೆ ನಿಮ್ಮ ಸಂಪತ್ತೇನೂ ಸವೆದು ಹೋಗುತ್ತದೆಯೇ? ’ ಎಂದೆ ಕೀಟಲೆಯ ಧ್ವನಿಯಲ್ಲಿ. ಅವನು ಕೋಪಿಸಿಕೊಳ್ಳದೆ ನುಡಿದ. ’ಆ ಕಲಾವಿದರು ಈ ಸಲವೂ ಸೇರಿದಂತೆ ಐದನೆಯ ಸಲ ಬಂದಿದ್ದರು. ಜನ ಕೇಳಿದ್ದನ್ನೇ ಎಷ್ಟೂಂತ ಕೇಳುತ್ತಾರೆ? ಹಾಗಾಗಿ ಜನ ಬಂದಿರಲಿಲ್ಲವೋ ಏನೋ.’ ಎಂದ. ಏನೇ ಆಗಲಿ ಕನ್ನಡ ಗಾಯಕರು, ಕಲಾವಿದರು ಯಾರೇ ಬರಲಿ ಅವರಿಗೆ ಅಲ್ಲಿರುವವರು ಸಹಾಯ ಮಾಡಲೇಬೇಕೆಂಬುದು ನಮ್ಮೆಲ್ಲರ ವಾದವಾಗಿತ್ತು. ಅವನು ಅದನ್ನು ಒಪ್ಪಲಿಲ್ಲ.

’ನಾನು ಅಮೆರಿಕಕ್ಕೆ ಹೋದಾಗ ಅಲ್ಲಿ ಕನ್ನಡಿಗರು ಅಪರೂಪವಾಗಿದ್ದರು. ಇಲ್ಲಿಂದ ಕಲಾವಿದರು ಬರುವುದು ಅಪರೂಪವಾಗಿತ್ತು. ಈಗಂತೂ ವರ್ಷವಿಡೀ ಯಾರಾದರೂ ಕಲಾವಿದರು, ಕವಿಗಳು,ನಟ,ನಟಿಯರು ಇದ್ದೇ ಇರುತ್ತಾರೆ. ಅಕ್ಕ ಸಮ್ಮೇಳನದ ನಂತರವಂತೂ ಕಲಾವಿದರ ದಂಡೇ ಅಲ್ಲಿರತ್ತೆ. ಹಾಗಾಗಿ ಈಗ ಕಾರ್ಯಕ್ರಮಗಳಿಗೆ ಜನ ಬರುವುದು ಕಡಿಮೆಯಾಗಿರಬಹುದು. ಹಾಗಂತ ಆಸಕ್ತಿ ಇಲ್ಲ ಅಂತೇನೂ ಅಲ್ಲ. ಈಗಲೂ ಕರ್ನಾಟಕದಿಂದ ಬಂದವರನ್ನು ಮನೆಯಲ್ಲಿ ಇರಿಸಿಕೊಂಡು ಉಪಚರಿಸುವುದರಲ್ಲಿ, ಅವರನ್ನು ಕರೆದುಕೊಂಡು ಊರು ಸುತ್ತಿಸೋದರಲ್ಲಿ, ಆದರಾಭಿಮಾನದಲ್ಲೇನೂ ಕೊರತೆಯಾಗಿಲ್ಲ. ಮೊದಲಿನಂತೆ ದುಡ್ಡು ಸಿಗಲೆಂದು ನಿರೀಕ್ಷಿಸಿ ಬಂದವರಿಗೆ ನಿರಾಸೆಯಾಗಿರಬಹುದು. ನಮಗೂ ಸಂಸಾರವಿದೆ, ನಮ್ಮದೇ ಕಷ್ಟಗಳಿವೆ. ದೊಡ್ದ ಮನೆ ಎಂದು ಆಸೆಯಿಂದ ಕೊಂಡೆವು. ಈ ಬಾರಿ ಅದಕ್ಕೆ ಹತ್ತಿರಹತ್ತಿರ ಹದಿನಾಲ್ಕು ಸಾವಿರ ತೆರಿಗೆ ಕಟ್ಟಿದ್ದೇನೆ. ನಮ್ಮ ಕಷ್ಟ ನೂರಿರತ್ತೆ. ಇಲ್ಲಿಯವರಿಗೆ ಹೇಳಿದರೂ ಅರ್ಥವಾಗೋದೇ ಇಲ್ಲ ಎಂದು ನಿಟ್ಟುಸಿರುಬಿಟ್ಟ.

ಹೌದಾ! ಎಂದು ಮನೆಯವರೆಲ್ಲಾ ಬಾಯಿ ಮೇಲೆ ಬೆರಳಿಟ್ಟುಕೊಂಡರು. ಅಮೆರಿಕಾ ಎಂದರೆ ಸ್ವರ್ಗ ಎಂದುಕೊಂಡಿದ್ದ ಮಂಕುಗಳು ಅವು. ನಾನು ಪರಿಸ್ಥಿತಿಯನ್ನು ತಿಳಿಗೊಳಿಸಲು ’ಹೋಗಲಿ ಬಿಡೋ. ಎಲ್ಲರಿಗೂ ಅವರದ್ದೇ ಆದ ಸಮಸ್ಯೆಗಳಿದ್ದೇ ಇರತ್ತೆ. ನಿಮ್ಮ ಬವಣೆ ನಮಗೆ ತಿಳಿಯಲ್ಲ. ನಮ್ಮ ಬದುಕು ನಿಮಗೆ ತಿಳಿಯಲ್ಲ ಬಿಡು’ ಎಂದು ಮಾತಿನ ಹರಿವನ್ನು ಬೇರೆಡೆಗೆ ತಿರುಗಿಸಿಬಿಟ್ಟೆ.

9 comments:

ತೇಜಸ್ವಿನಿ ಹೆಗಡೆ said...

ಕಲಾವಿದನಾದವನು ತನ್ನ ಕೆಲೆಯನ್ನು ಗೌರವಿಸಬೇಕೆಂದು ಬಯಸಬೇಕೇ ವಿನಃ ಕಲೆಗೆ ಬೆಲೆಯನ್ನು ನಿಗದಿಸಿ ಬಯಸಬಾರದು. ದೂರದ ಬೆಟ್ಟ ಸದಾ ನುಣ್ಣಗೆ ಕಾಣುವುದು.. ಬರಹ ಚೆನ್ನಾಗಿದೆ.

Anonymous said...

ಅವರವರ ಚಿಂತೆ ಅವರಿಗಂತೆ ! ನಿಜ. ಚೆನ್ನಾಗಿದೆ.

sunaath said...

ಮೈನಾ,
ನಿಮ್ಮ ಲೇಖನ ಚೆನ್ನಾಗಿದೆ.ನಾಣ್ಯದ ಎರಡೂ ಮುಖಗಳನ್ನು ತೋರಿಸುತ್ತದೆ.

MyNa said...

ಸುನಾಥ ಅವರೇ, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

NilGiri said...

ಮೈನಾ ಅವರೆ ನಿಮ್ಮ ಬರಹ ಚೆನ್ನಾಗಿದೆ.

ನಿಮ್ಮ ಸೋದರಳಿಯನ ಅಭಿಪ್ರಾಯ ಹೆಚ್ಚು ಕಡಿಮೆ ಸರಿಯಾದುದೇ. ಹೇಳಿದ್ದೇ ಜೋಕುಗಳು, ಹಾಡಿದ್ದೇ ಹಾಡುಗಳು, ಕ್ಯಾಸೆಟ್ಟಿನಲ್ಲಿರುವ ಜೋಕುಗಳನ್ನೇ ಎಷ್ಟು ಸಲವೆಂದು ಕೇಳುವುದು? ಈ ನಡುವೆ ನಾವು " ಇಂಥಹ" ಕಲಾವಿದರ ಕಾರ್ಯಕ್ರಮಗಳಿಗೆ ಹೋಗುವುದನ್ನೇ ಬಿಟ್ಟಿದ್ದೇವೆ.

MyNa said...

ನೀಲಗಿರಿಯವರೆ,ಪ್ರತಿಕ್ರಿಯಿಸಿ, ಪ್ರೋತ್ಸಾಹಿಸಿದ್ದಕ್ಕಾಗಿ ಧನ್ಯವಾದಗಳು.

ವಿ.ರಾ.ಹೆ. said...

ನಮಸ್ತೆ,
ವಸ್ತು ಸ್ಥಿತಿಯನ್ನು ಚೆನ್ನಾಗಿ ಬಿಂಬಿಸಿದ್ದೀರ.
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಲ್ವೆ.

MyNa said...

ವಿಕಾಸ್ ಹೆಗಡೆಯವರೇ, ಪ್ರತಿಕ್ರಿಯೆಗೆ ಧನ್ಯವಾದ, ಭೇಟಿ ಕೊಡುತ್ತಿರಿ.

Anonymous said...

Hi Myna..
Well said.. Doorada betta nunnage... I am here in US from past 3 years.. and to be frank...Whatever we earn here, we pay more than 50-75% as either tax, insurance. or for some other purpose..money goes back to govt..